ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಯಕ್ಷಗಾನದಲ್ಲಿ ಪರಂಪರೆಯ ಪ್ರಜ್ಞೆ

ಲೇಖಕರು :
ಡಾ. ವೆ೦ಕಟರಾಜ ಪುಣಿ೦ಚಿತ್ತಾಯ
ಶನಿವಾರ, ಮಾರ್ಚ್ 12 , 2016

ಯಕ್ಷಗಾನಕ್ಕೊಂದು ವಿಶಿಷ್ಟವಾದ ಪರಂಪರೆ ಇದೆಯೆಂದೂ, ಅದನ್ನು ನಾವು ಕೈಬಿಡಬಾರದೆಂದೂ ಬಹಳ ವರ್ಷಗಳಿಂದ ಹೇಳುತ್ತಾ ಬಂದಿದ್ದೇವೆ. ಆದರೆ ನಾಟಕಾದಿ ಕಲೆಗಳ ಬಗ್ಗೆ ಈ ಮಾತನ್ನು ನಾವು ಹೇಳುತ್ತಾ ಇಲ್ಲ. ಅಲ್ಲಿ ಹೊಸ ಹೊಸ ತಂತ್ರಗಳ ಆವಿಷ್ಕಾರವೇ ಕಲೆಯ ಬೆಳವಣಿಗೆಯ ಲಕ್ಷಣ ಎಂದು ನಿರ್ಭೀತಿಯಿಂದ ಹೇಳುತ್ತೇವೆ. ಅಲ್ಲಿ ನಿರ್ದೇಶಕನಿಂದ ನಿರ್ದೇಶಕನಿಗೆ ಪ್ರದರ್ಶನಗಳ ಸ್ವರೂಪ ವ್ಯತ್ಯಾಸಹೊಂದುತ್ತಾ ಹೋಗುತ್ತದೆ.

ಅಭಿಮನ್ಯು ಕಾಳಗದ ಒ೦ದು ದೃಶ್ಯ
ಪರಂಪರೆಯನ್ನು ನಾವು ಒಂದು ಶಾಸ್ತ್ರ ಎನ್ನುವುದಾದರೆ, ಶಾಸ್ತ್ರವನ್ನು ಒಂದು ಪರಂಪರೆ ಎಂದು ಯಾಕೆ ಹೇಳಬಾರದು? ಆಗ ಭರತನ ನಾಟ್ಯಶಾಸ್ತ್ರವೂ ಒಂದು ಪರಂ ಪರೆಯಾಗುತ್ತದೆ. ನಾಟಕಕಾರರು ಆ ಪರಂಪರೆಯನ್ನು ಮೀರಬಹುದೇ? ರಂಗಭೂಮಿ ಯಲ್ಲಿ ಕೆಲವು ದೃಶ್ಯಗಳನ್ನು ಕಾಣಿಸಬಾರದು ಎಂದು ನಿಯಮವಿದೆ.

`ದೂರಾಧ್ವಾನಂ ವಧಂ ಯುದ್ಧಂ....' ಇತ್ಯಾದಿ ಕೆಲವು ದೃಶ್ಯಗಳನ್ನು `ಪ್ರತ್ಯಕ್ಷಾನಿ ನ ನಿರ್ದಿಶೇತ್' (ರಂಗದಲ್ಲಿ ಪ್ರತ್ಯಕ್ಷವಾಗಿ ಕಾಣಿಸಬಾರದು) ಎಂದು ನಾಟ್ಯಶಾಸ್ತ್ರ ಹೇಳುತ್ತದೆ.

ಆಶ್ಚರ್ಯವೆಂದರೆ ಯಕ್ಷಗಾನದಲ್ಲಿ `ದೂರಾಧ್ವಾನ'ವನ್ನು ರಂಗಭೂಮಿಗೆ ಒಂದು ಸುತ್ತು ಬರುವ ಮೂಲಕ ಸಣ್ಣ `ಅಧ್ವಾನ'ವನ್ನಾಗಿ ಮಾಡಲಾಗುತ್ತದೆ. ಅದು ಸಭಿಕರಿಗೆ ಅಸಹನೀಯವೆಂದು ಆಗುವುದಿಲ್ಲ. ವಧೆಯಂತೂ ಯಕ್ಷಗಾನದಲ್ಲಿ ಬೇಕೇ ಬೇಕು. `ಕಾಳಗ' ಎಂಬ ಪದವೇ ಯಕ್ಷಗಾನದ ಪರ್ಯಾಯ ಪದವಾಗಿರುವಾಗ ಅಂತಹ ಕಾಳಗದಲ್ಲಿ ವಧೆಯಾಗದಿರುತ್ತದೆಯೇ? ನಮ್ಮ ಯಕ್ಷಗಾನದ ಕೆಲವು ಪ್ರಸಂಗಗಳ ಹೆಸರೇ `ಕಾಳಗ' ಪದವನ್ನು ಒಳಗೊಂಡಿದೆ.

ಉದಾ: ವಾಲಿ ಸುಗ್ರೀವರ ಕಾಳಗ, ಕೃಷ್ಣಾರ್ಜುನರ ಕಾಳಗ, ಕುಂಭಕರ್ಣ ಕಾಳಗ, ಇಂದ್ರಜಿತು ಕಾಳಗ, ಅತಿಕಾಯ ಕಾಳಗ ಇತ್ಯಾದಿ. ಕಾಳಗವೆಂಬ ಪದ ತಪ್ಪಿದರೆ ಮತ್ತೆ ವಧೆಯೇ ಗತಿ: ರಾವಣ ವಧೆ, ಕಂಸ ವಧೆ, ನರಕಾಸುರ ವಧೆ ಇತ್ಯಾದಿ.

ಆದರೆ ಯಕ್ಷಗಾನದ `ಕಾಳಗ' ಅದೊಂದು ದುರಂತವಾಗಿ ನಮಗೆ ಕಾಣಿಸುತ್ತಿಲ್ಲ. ಯಾಕೆಂದರೆ ಆ ಯುದ್ಧದ ಕ್ರಮವೇ ಕಲಾತ್ಮಕವಾದುದು. ಯುದ್ಧದಲ್ಲಿ ಹೊಡೆತದ ಸರಳ ಅಭಿನಯ ಮಾತ್ರ ಇರುತ್ತದೆ. ಗಂಭೀರ ಹೊಡೆತಗಳಿರುವುದಿಲ್ಲ. ಪೌರುಷದ ಮಾತು ಗಳನ್ನು ಹೇಳುತ್ತಾ ಹಾರುತ್ತಾ ಕೊನೆಗೆ ಹೊಡೆದುಕೊಳ್ಳುವ ಆ ಕ್ರಮವು ಪ್ರೇಕ್ಷಕನಲ್ಲಿ ವೀರರಸವನ್ನು ಹುಟ್ಟಿಸುತ್ತದೆ.

ಕಾಳಗದ ಮುಂದಿನ ದೃಶ್ಯ ಇನ್ನೂ ಸ್ವಾರಸ್ಯಕರವಾದುದು. ಇತ್ತಂಡದವರು ತಮ್ಮ ಶಸ್ತ್ರಾಸ್ತ್ರಗಳನ್ನು ಜೊತೆಮಾಡಿ ಅಡ್ಡಕ್ಕೆ ಹಿಡಿದು ರಂಗದ ಆ ಕಡೆಗೆ ಈ ಕಡೆಗೆ ಚಲಿಸುತ್ತಾ ಕುಣಿಯುತ್ತಾ ಕೊನೆಗೆ ಇಬ್ಬರೂ ಗರಗರನೆ ತಿರುಗುತ್ತಾ ಸೋಲುವವನ ಕೈಯಾ ಯುಧವನ್ನು ಗೆಲ್ಲುವವನು ಕಿತ್ತುಕೊಳ್ಳುತ್ತಾನೆ. ಇದು ಯಕ್ಷಗಾನದ ಒಂದು ಶೈಲಿ ಮಾತ್ರ. ಹೀಗೆ ಯಕ್ಷಗಾನದ ಕಾಳಗ ತನ್ನದೇ ಆದ ಒಂದು ಶೈಲಿಯಿಂದ ಅತ್ಯಂತ ಸಾಂಕೇತಿಕ ವಾಗಿ ಮತ್ತು ಅದೇ ಒಂದು ಪರಂಪರೆಯಾಗಿ ಸಹ ಬೆಳೆದುಕೊಂಡು ಬಂದಿದೆ.

ನಾಟಕಾದಿಕಲೆಗಳಿಗೂ ಯಕ್ಷಗಾನಕಲೆಗೂ ವ್ಯತ್ಯಾಸವಿದೆ. ಯಕ್ಷಗಾನವು ಜಾನಪದ ಕಲೆ. ನಾವು ನಾಟಕಾದಿಕಲೆಗಳನ್ನು ನೋಡುವ ದೃಷ್ಟಿಗೂ ಯಕ್ಷಗಾನಕಲೆಯನ್ನು ನೋಡುವ ದೃಷ್ಟಿಗೂ ವ್ಯತ್ಯಾಸವಿದೆ. ಜನಪದಸಂಗೀತಕ್ಕೆ ಅದರದ್ದೇ ಆದ ಒಂದು ಸೌಂದರ್ಯವಿರುವಂತೆ ಜಾನಪದಕಲೆಗಳಿಗೂ ಅವುಗಳದೇ ಆದ ಒಂದು ಸಂಸ್ಕೃತಿ ಸೌಂದರ್ಯವಿದೆ. ಅದು ಒಬ್ಬ ಪಾರ್ತಿಸುಬ್ಬನೋ, ಅಜಪುರದ ಸುಬ್ಬನೋ, ಸಂಕಯ್ಯ ಭಾಗವತರೋ, ಬೆನಕಯ್ಯ ಭಾಗವತರೋ ಅಥವಾ ಸುಬ್ರಾಯ ಶ್ಯಾನುಭಾಗರೋ ರೂಪಿಸಿದ ಸೌಂದರ್ಯವಲ್ಲ. ಅವರೆಲ್ಲರ ದುಡಿಮೆಯೂ ಪ್ರತಿಭೆಯೂ ಒಟ್ಟಾಗಿ ರೂಪು ಗೊಂಡ ಒಂದು `ಸಂಸ್ಕೃತಿ ಸಂಪ್ರದಾಯ' ಎನ್ನಬಹುದು. ಆ ಸಮಷ್ಟಿಕಲಾ ಸ್ವರೂಪದಲ್ಲಿ ಪಾರ್ತಿಸುಬ್ಬ, ಅಜಪುರದ ಸುಬ್ಬ, ದೇವಿದಾಸ, ಬೆನಕಯ್ಯ ಭಾಗವತ ಇವರೆಲ್ಲರ ಕೊಡುಗೆಯೂ ಇದೆ.

ನಮ್ಮ ಜನತೆ ಪರಂಪರೆಯೆಂದು ಗುರುತಿಸುವುದು ಯಾವುದನ್ನು? ನಾವು ಕೇಳಿದ್ದನ್ನು, ಕಂಡದ್ದನ್ನು ಮತ್ತು ಮೆಚ್ಚಿದ್ದನ್ನು! ಕೆಲವೊಮ್ಮೆ ಅದು ಬದಲಾಗುತ್ತಾ ಹೋಗುತ್ತದೆ. ಕಾಲಕ್ಕೆ ತಕ್ಕಂತೆ ಮಾರ್ಪಾಡಾಗುತ್ತದೆ. ಜಾನಪದದಲ್ಲಿ ಅದು ಸಹಜ. ಪ್ರಕೃತ ನಾವು ನೋಡುತ್ತಿರುವ ಯಕ್ಷಗಾನವು ಈ ರೂಪಕ್ಕೆ ಬರಬೇಕಾದರೆ ಎಷ್ಟೋ ಅವಸ್ಥಾಂತರಗಳನ್ನು ಅದು ಪಡೆದಿರಲೇಬೇಕು. ಅನೇಕ ಬದಲಾವಣೆಗಳಿಗೆ ಅದು ಒಗ್ಗಿರಬೇಕು - ಎಂಬ ಸತ್ಯಾಂಶವನ್ನು ನಾವು ಮರೆಯುವಂತಿಲ್ಲ. ಆದರೆ ಅದಕ್ಕೊಂದು ಮೂಲಸ್ವರೂಪವಿದೆ, ಅದು ಬದಲಾಗಬಾರದು.

ಪ್ರಕೃತ ನಾವು ಗುರುತಿಸಬಹುದಾದ ಪರಂಪರೆಯೆಲ್ಲ ಹೆಚ್ಚೆಂದರೆ ಎರಡು ಮೂರು ತಲೆಮಾರುಗಳ ಅನುಭವಕ್ಕೆ ಸೀಮಿತ ವಾದುದು. ಎಂದರೆ ನಮ್ಮ ಕಣ್ಣಿನಲ್ಲಿ ನಾವು ಕಂಡದ್ದು - ನಮ್ಮ ಹಿರಿಯರು ಕಂಡದ್ದು ಮತ್ತು ಅವರ ಹಿರಿಯರು ಕಂಡದ್ದು! ಇದಕ್ಕಿಂತ ಆಚೆಗಿನ ಸತ್ಯಾಂಶ ನಮಗೆ ಲಭಿಸಲಾರದು. ಈಗ ಹಾಗಲ್ಲ. ಆಡಿಯೋ ಇದೆ; ವೀಡಿಯೋ ಇದೆ. ಇವುಗಳ ಮೂಲಕ ನಾವು ಕಂಡ, ಕೇಳಿದ ಪರಂಪರೆಯೆಲ್ಲವನ್ನೂ ಮುಂದಿನ ತಲೆಮಾರಿಗೆ ದಾಟಿಸಲು ಸಾಧ್ಯವಿದೆ. ಏನೇ ಇರಲಿ, ಕಲೆಯಲ್ಲಿ ಸುಧಾರಣೆಗಳನ್ನು ಮಾಡಿಕೊಳ್ಳಬೇಕಾದ ಸಂದರ್ಭ ಬಂದಾಗ ಅದರ ಮೂಲಸ್ವರೂಪ ತಳ್ಳಿಹೋಗದಂತೆ ಜಾಗ್ರತೆವಹಿಸಬೇಕಾದುದು ಕಲಾವಿದರ ಹೊಣೆಗಾರಿಕೆಯಾಗಿದೆ.

ಪಾತಾಳ ವೆಂಕಟ್ರಮಣ ಭಟ್ಟರು ತೈಲ ವರ್ಣಚಿತ್ರದಲ್ಲಿ
ಬಹಳ ವರ್ಷಗಳ ಹಿಂದೆ ಡಾ. ಶಿವರಾಮ ಕಾರಂತರು ಒಂದು ಮಾತು ಹೇಳಿದ್ದರು- ಏನೆಂದರೆ, ಯಕ್ಷಗಾನದಲ್ಲಿ ಸ್ತ್ರೀಪಾತ್ರಕ್ಕೆ ವೇಷವಿಲ್ಲ ಎಂದು. ರಾವಣ ಘನ ಗಂಭೀರವಾದ ವೇಷದಿಂದ ರಂಗಕ್ಕೆ ಬಂದರೆ ಮಂಡೋದರಿ ಸಾಮಾನ್ಯಳಾದ ಹೆಣ್ಣಿನಂತೆ ರಂಗಕ್ಕೆ ಬರುತ್ತಾಳೆ. ರಾವಣ ವೇಷದ ಸಾಂಕೇತಿಕತೆ ಆತನ ರಾಣಿಯಾದ ಮಂಡೋದರಿಗೆ ಯಾಕಿಲ್ಲ? ಎಂಬುದು ಒಂದು ಪ್ರಶ್ನೆ. ಇದನ್ನು ಹೌದೆಂದು ಒಪ್ಪಿದ ಆ ಕಾಲದ ಖ್ಯಾತ ಸ್ತ್ರೀ ಪಾತ್ರಧಾರಿಯಾದ ಶ್ರೀ ಪಾತಾಳ ವೆಂಕಟ್ರಮಣ ಭಟ್ಟರು ಸ್ತ್ರೀ ಪಾತ್ರಗಳಿಗೆ ತಮ್ಮದೇ ಆದ ಒಂದು ಶಿರೋಭೂಷಣವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದರು.

ಡಿವಿಜಿಯವರ ಅಂತಃಪುರಗೀತೆಗಳಲ್ಲಿ ಬೇಲೂರಿನ ಶಿಲಾಬಾಲಿಕೆಯರ ಚಿತ್ರಗಳಿವೆ. ಅದನ್ನು ನೋಡಿ ಸ್ಫೂರ್ತಿಗೊಂಡ ಪಾತಾಳ ವೆಂಕಟ್ರಮಣ ಭಟ್ಟರು ನೇರವಾಗಿ ಬೇಲೂರಿಗೆ ಹೋದರು. ಅಲ್ಲಿಯ ಶಿಲಾಬಾಲಿಕೆಯರ ವೇಷಭೂಷಣಗಳನ್ನು ಗುರುತಿಸಿಕೊಂಡರು. ತಮ್ಮ ಮಿತ್ರರಾದ ಕಲ್ಮಡ್ಕ ಮಹಾಬಲ ಭಟ್ಟರನ್ನು ಕಂಡು ಶಿಲಾಬಾಲಿಕೆಯರು ಧರಿಸಿದಂತಹ ಅದೇ ಸ್ವರೂಪದ ಶಿರೋಭೂಷಣಗಳನ್ನು ತಯಾರಿಸಿಕೊಡಲು ಹೇಳಿದರು.

ಸುಮಾರು 1964-68ರ ಕಾಲಘಟ್ಟದಲ್ಲಿ ನಡೆದ ಸಂಗತಿ ಇದು. ಆ ಶಿರೋ ಭೂಷಣಗಳನ್ನು ಧರಿಸಿ ರಂಗದಲ್ಲಿ ಪಾತ್ರವಹಿಸಿದ ಪಾತಾಳ ವೆಂಕಟ್ರಮಣ ಭಟ್ಟರ ವೇಷಗಳನ್ನು ಜನತೆ ಪ್ರೋತ್ಸಾಹಿಸಿತು. ಹೀಗೆ ಯಕ್ಷಗಾನದ ಮೂಲಸೌಂದರ್ಯವು ಕೆಡದಂತೆ ಕೆಲವೊಂದು ಹೊಸ ಪ್ರಯೋಗಗಳನ್ನು ಮಾಡಿದ ಸಾಹಸಪ್ರವೃತ್ತಿಯವರು ಪಾತಾಳ ವೆಂಕಟ್ರಮಣ ಭಟ್ಟರು. ಒಮ್ಮೆ ಉಡುಪಿಗೆ ಹೋಗಿದ್ದಾಗ ಅಲ್ಲಿಯ ಕನಕನ ಕಿಂಡಿಯ ಮೇಲ್ಭಾಗದ ಗೋಡೆಯಲ್ಲಿದ್ದ ಗೋಪಿಕಾಸ್ತ್ರೀಯರ ರೇಖಾಚಿತ್ರಗಳನ್ನು ನೋಡಿ ಅದರಂತೆ ಸೀರೆಯುಟ್ಟು ರಂಗಕ್ಕೆ ಬಂದ ವೆಂಕಟ್ರಮಣ ಭಟ್ಟರ ಗೋಪಿಕಾಸ್ತ್ರೀಯ ಪಾತ್ರವನ್ನು ಇಂದಿಗೂ ಜ್ಞಾಪಿಸಿಕೊಳ್ಳುವವರಿದ್ದಾರೆ.

ನಮ್ಮ ಪುರಾಣಪಾತ್ರಗಳಿಗೆ ಒಂದು ನಿರ್ದಿಷ್ಟವಾದ ಸ್ವರೂಪವನ್ನು ಚಿತ್ರಿಸಿಕೊಟ್ಟ ಕಲಾವಿದರು ರಾಜಾ ರವಿವರ್ಮರು. ಅನಂತರದ ಎಲ್ಲ ಕಲಾವಿದರೂ ಅದನ್ನೇ ಆದರ್ಶವಾಗಿ ಇಟ್ಟುಕೊಂಡರು. ಪಾತಾಳ ವೆಂಕಟ್ರಮಣ ಭಟ್ಟರು ತಾವು ವಹಿಸುತ್ತಿದ್ದ ಅನೇಕ ಪುರಾಣಪಾತ್ರಗಳಿಗೆ ರವಿವರ್ಮನ ಕಲ್ಪನೆಗಳನ್ನು ಸ್ವೀಕರಿಸಿಕೊಂಡಿದ್ದಾರೆ.

ಹೀಗೆ ತಮ್ಮ ಕಲಾಜೀವನದುದ್ದಕ್ಕೂ ಹೊಸ ಹೊಸ ಪ್ರಯೋಗಗಳನ್ನು ಕಂಡು ಕೊಳ್ಳುವ ಮನಃಪ್ರವೃತ್ತಿಯ ಪಾತಾಳ ವೆಂಕಟ್ರಮಣ ಭಟ್ಟರು ಒಬ್ಬ ಸಹೃದಯ ಹಾಗೂ ಪ್ರಯೋಗಶೀಲ ಕಲಾವಿದರು ಎಂಬುದರಲ್ಲಿ ಸಂದೇಹವಿಲ್ಲ.

[`ಯಕ್ಷಶಾಂತಲಾ - ಪಾತಾಳ', ಪಾತಾಳ ವೆಂಕಟರಮಣ ಭಟ್ಟ ಅಭಿನಂದನ ಗ್ರಂಥ, ಸಂ.: ಮುಳಿಯ ಶಂಕರ ಭಟ್ಟ, ಪ್ರ.: ಪಾತಾಳ ಅಭಿನಂದನ ಕೃತಿ ಪ್ರಕಾಶನ ಸಮಿತಿ, ಪುತ್ತೂರು, 2005 - ಇದರಲ್ಲಿ ಪ್ರಕಟಿತ]

**********************


ಕೃಪೆ : puninchathaya.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ